ಟಬಾನಿಡೀ
	ಡಿಪ್ಟಿರ ಗಣಕ್ಕೆ ಸೇರಿದ ಬಲವಾದ ಮೈಕಟ್ಟಿನ ಹಾಗೂ ಚುರುಕಾದ ಕೀಟಗಳ ಒಂದು ಕುಟುಂಬ. ಇದರಲ್ಲಿ ಒಟ್ಟು 2,500ಕ್ಕೂ ಹೆಚ್ಚು ಪ್ರಬೇಧಗಳಿವೆ. ಭಾರತದಲ್ಲಿ 150ಕ್ಕೂ ಹೆಚ್ಚು ಪ್ರಬೇಧಗಳು ಕಾಣಬರುತ್ತವೆ. ಬಿರುಗೂದಲುಗಳಿಲ್ಲದ ದೇಹ, ಎಡಬಲಗಳಿಗೆ ಹೊರಚಾಚಿರುವ ದೊಡ್ಡ ಕಣ್ಣುಗಳು, ಮೂರನೆಯ ಖಂಡದಲ್ಲಿ ಉಗುರುಗಳಂಥ ಗುರುತುಗಳನ್ನುಳ್ಳ ಸ್ಪರ್ಶಕಾಂಗ (ಆಂಟೆನೀ), ಆಹಾರವನ್ನು ಚುಚ್ಚಲು ಅನುಕೂಲವಾಗಿರುವ ಗಾಯಭಾಗಗಳು-ಇವು ಈ ಕೀಟಗಳ ಮುಖ್ಯ ಲಕ್ಷಣಗಳು. ಹೆಣ್ಣು ಕೀಟಗಳು ಸಾಮಾನ್ಯವಾಗಿ ಆಕಳಿನ ದೇಹದಿಂದ ರಕ್ತ ಹೀರಿ ಬದುಕುತ್ತವೆ. ಮಾನವನನ್ನೂ ಪೀಡಿಸುವುದುಂಟು. ನೀರಿನ ಬಳಿ ಬೆಳೆಯುವ ಸಸ್ಯಗಳ ಮೇಲೆ ಮೊಟ್ಟೆಯಿಡುತ್ತವೆ. ಮೊಟ್ಟೆಯೊಡೆದು ಹೊರಬರುವ ಎಳೆಯ ಡಿಂಬಗಳ ದೇಹದ ಮೇಲೆ ಅಡ್ಡಡ್ಡವಾದ ಏಣುಗಳಿವೆ. ಡಿಂಬಗಳು ತೇವದ ಪ್ರದೇಶದಲ್ಲೇ ಇದ್ದು ಒಂದೆರಡು ತಿಂಗಳುಗಳ ಕಾಲ ಸೂಕ್ಷ್ಮಾಣುಗಳನ್ನು ತಿಂದು ಬೆಳೆದು ಅನಂತರ ಕೋಶಾವಸ್ಥೆಯನ್ನು ಸೇರುವುವು. ಈ ಅವಸ್ಥೆಯಲ್ಲಿ ರೂಪಪರಿವರ್ತನೆ ನಡೆದು ಪ್ರೌಢಕೀಟಗಳು ಹೊರಬರುತ್ತವೆ. ದಕ್ಷಿಣ ಭಾರತದಲ್ಲಿ ಟಬಾನಸ್ ಸ್ಟ್ರಯೇಟಸ್, ಕ್ರೈಸಾಪ್ಸ್ ಡಿಸ್ಪಾರ್, ಪ್ಯಾಂಗೋನಿಯ (ಕೊರಿಸೊûನ್ಯೊರ) ಟ್ಯಾಪ್ರೊಬಾನ್ (ಮೈಸೂರಿನ ಚಾಮುಂಡಿ ಬೆಟ್ಟದ ಪ್ರದೇಶದಲ್ಲಿ) ಮತ್ತು ಹೆಮಟೋಪ ಮಾನ್ಟಾನ (ಚಿಕ್ಕಮಗಳೂರಿನ ಬಾಬಾಬುಡನ್‍ಗಿರಿ ಪ್ರದೇಶದಲ್ಲಿ) ಪ್ರಬೇಧಗಳನ್ನು ಕಾಣಬಹುದು. ಟಬಾನೆಸ್ ಜಾತಿಯ ಕೀಟಗಳು ವೈರಸ್ಸುಗಳಿಂದ ಮತ್ತು ಬ್ಯಾಕ್ಟೀರಿಯಗಳಿಂದುಂಟಾಗುವ ವ್ಯಾಧಿಗಳನ್ನು ಹರಡುವುವು.
(ಕೆ.ಜಿ.ಎನ್.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ